ಶುಕ್ರವಾರ, ಅಕ್ಟೋಬರ್ 14, 2011

Chikkamela

ಕುಂದಾಪ್ರ ಪರಿಸರದಲ್ಲಿ ಚಿಕ್ಕಮೇಳದ ಗೆಜ್ಜೆನಾದ 
ಇದೀಗ ಮಳೆಗಾಲ. ಯಕ್ಷಗಾನ ಮೇಳಗಳು ನಿದ್ರೆ ಹೋಗಿವೆ.  ಕಲಾವಿದರಿಗೂ  ಸ್ವಲ್ಪ  ವಿಶ್ರಾಂತಿ. ಈ ಸಮಯದಲ್ಲಿ ಯಕ್ಷಗಾನ ನೋಡಬೇಕೇ?. ನಗರ ಪ್ರದೇಶದ ಸಭಾಭವನಕ್ಕೆ ಹೋಗಬೇಕು. ಆದರೆ ಬಯಲಿನಲ್ಲಿ ಕುಳಿತು ನೋಡಿದಷ್ಟು ಖುಷಿಯನ್ನು ಇದು ನೀಡೀತೇ?. ಖಂಡಿತಾ ಇಲ್ಲ.  ಮಳೆಗಾಲದಲ್ಲಿ ಮೇಳದ ತಿರುಗಾಟವಿಲ್ಲ್ಲ ಎಂದು ಪ್ರೇಕ್ಷಕರು ಕೊರಗುವ ಅಗತ್ಯವಿಲ್ಲ.  ಮಳೆಗಾಲದಲ್ಲೂ ಮನೆಮನೆಯಲ್ಲೂ ಯಕ್ಷಗಾನ. ಹೀಗೊಂದು ಪ್ರಯತ್ನವು ಕುಂದಾಪುರ ತಾಲೂಕಿನ ಗ್ರಾಮೀಣ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. ಅದೇ ಮನೆ ಮನೆ ಸುತ್ತುವ ಚಿಕ್ಕಮೇಳ
 ಹೆಸರೇ ಹೇಳುತ್ತಿದೆ. ಇದು ಚೊಕ್ಕ ಮತ್ತು ಚಿಕ್ಕಮೇಳ. ಇಬ್ಬರು ವೇಷಧಾರಿಗಳು ಹೆಚ್ಚೆಂದರೆ ಇಬ್ಬರೇ. ಒಂದು ಪುರುಷ ವೇಷವಾದರೆ; ಇನ್ನೊಂದು ಸ್ತ್ರೀವೇಷ. ಜೊತೆಗೆ ಭಾಗವತರು ಬೇಕಲ್ಲವೇ?. ಅವರೊಂದಿಗೆ ಮದ್ದಲೆಯವರು ಮತ್ತು ಶ್ರುತಿಯವರು.  ಅಬ್ಬಬ್ಬಾ ಎಂದರೆ ಒಂದೈದು ಮಂದಿ. ಚಿಕ್ಕಮೇಳ ಸಂಜೆ 6 ರಿಂದ ರಾತ್ರಿ 10:30 ರ ತನಕ ತಿರುಗಾಟ ನಡೆಸುತ್ತದೆ. ಒಂದೊಂದು ಮನೆಯಲ್ಲಿ  ಸುಮಾರು 15-20 ನಿಮಿಷ ಪ್ರದರ್ಶನ. ಮನೆಯ ಮುಂಭಾಗದ ಚಾವಡಿಯೆ ರಂಗಸ್ಥಳ.  ಗ್ರಾಮೀಣ ಭಾಗದ ಜನರಿಗೆ ಹೀಗೆ ಬರುವ ಮೇಳದ ಬಗ್ಗೆ ಗೌರವ ಮತ್ತು ಭಕ್ತಿ. ಅಕ್ಕಿ, ತೆಂಗಿನ ಕಾಯಿ. ಅಡಿಕೆ, ವೀಳ್ಯದೆಲೆ, ದೀಪ ಮೊದಲಾದವುಗಳನ್ನು ಸಿದ್ಧಪಡಿಸಿ ಕೊಂಡು ಕಾಯುತ್ತಿರುತ್ತಾರೆ. ಈ ಭಕ್ತಿಗೂ ಒಂದು ಕಾರಣವಿದೆ. ಚಿಕ್ಕಮೇಳದಲ್ಲಿಯೂ ದೇವತಾ ಆರಾಧನೆಯ ಕಲ್ಪನೆ ಇದೆ.  ಇದೂ ಒಂದು ಸೇವೆ. ಗೆಜ್ಜೆಸೇವೆ ಎಂದೇ ಗೌರವ. ಈ ಸೇವೆಯನ್ನು ಮನೆ ಮುಂದೆ ನಡೆಸಿದಲ್ಲಿ ಅನಿಷ್ಠಗಳೆಲ್ಲಾ ನಾಶವಾಗುತ್ತವೆ ಎಂಬ ನಂಬಿಕೆ. ಚಿಕ್ಕಮೇಳಕ್ಕೆ ಸಂಭಾವನೆಯೂ ಅವರವರ ಇಷ್ಟಕ್ಕೆ ಬಿಟ್ಟ ವಿಚಾರ. ರೂ.50, 100, 200 ಹೀಗೆ ಅವರವರ  ಅನುಕೂಲಕ್ಕೆ ತಕ್ಕಂತೆ ನೀಡುತ್ತಾರೆ. ಪುರಾಣ ಪ್ರಸಂಗಗಳ ಸನ್ನಿವೇಶದ ಪ್ರದರ್ಶನಕ್ಕೆ ಇಲ್ಲಿನ ಆದ್ಯತೆ. ಎರಡು ಪಾತ್ರಕ್ಕೆ ತಕ್ಕುದಾದ ಕಥಾಭಾಗವನ್ನೇ ಆಯ್ದುಕೊಳ್ಳುವುದು ಸಾಮಾನ್ಯ ಕ್ರಮ. ಸುಮಾರು 15 ನಿಮಿಷಗಳ ಪ್ರದರ್ಶನದ ತರುವಾಯ ಮನೆಮಂದಿಗೆ ಒಳಿತನ್ನೇ ಮಾಡುವಂತೆ ಪ್ರಾಥರ್ಿಸಿ ದೇವರ ಪ್ರಸಾದವನ್ನು ನೀಡಲಾಗುತ್ತದೆ. ಕೆಲವು ಮನೆಯವರು ಚಿಕ್ಕಮೇಳದ ಕಲಾವಿದರಿಗೆ ಎಲೆ ಅಡಿಕೆ ಮೆಲ್ಲಲು ನೀಡುವುದುಂಟು. ಕೆಲವು ಮನೆಯವರು ಚಾ, ತಿಂಡಿಗಳನ್ನೂ ನೀಡುತ್ತಾರೆ. ಆದರೆ ಹಾಗೆ ಕೊಡಲೇಬೇಕೆಂಬ ಆಗ್ರಹವಿಲ್ಲ.
 ಈ ಕಲೆಗೆ ಪುನರ್ಜನ್ಮ ನೀಡುವ ದೃಷ್ಟಿಯಿಂದ ಸಂಘಟನೆಯೊಂದು ಕುಂದಾಪುರದ ಪರಿಸರದಲ್ಲಿ ಹುಟ್ಟಿಕೊಂಡಿರುವುದು ಸಂತéೋಷದ ಸಂಗತಿ.  ಮಂದಾತರ್ಿ ಸಮೀಪದ ನಡೂರಿನ ಯಕ್ಷಸಿರಿ ಯಕ್ಷಗಾನ ಚಿಕ್ಕಮೇಳ ಈ ಹೊಣೆ ಹೊತ್ತಿದೆ. ಮಂದಾತರ್ಿ ಮೇಳದ ಕಲಾವಿದ ದಿನಕರ ಕುಂದರ್ ಈ ಪುನರುಜ್ಜೀವ ಕ್ರಿಯೆಯ ಮುಂಚೂಣಿಯಲ್ಲಿದ್ದಾರೆ. ಆಲೂರು ಸುರೇಶ್, ಬುಕ್ಕಿಗುಡ್ಡೆ ಮಹಾಬಲ, ಕೆರಾಡಿ ವಿಶ್ವನಾಥ, ಜಯರಾಮ ಶಂಕರನಾರಾಯಣ ಮೊದಲಾದವರು ಚಿಕ್ಕಮೇಳದಲ್ಲಿ ಕಲಾವಿದರಾಗಿ ಜೀವತುಂಬಲು ಶ್ರಮಿಸುತ್ತಿದ್ದಾರೆ. ಗ್ರಾಮೀಣ ಸಂಸ್ಕೃತಿ ನಾಶವಾಗುತ್ತಿದೆ ಎಂಬ ಕೂಗು ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ.ಈ ನಿರಾಶೆಯ ಕಾರ್ಮೋಡದ ನಡುವೆಯೂ ಈ ಕಲಾವಿದರ ಶ್ರಮ ಹೊಸ ಆಶಾಕಿರಣವನ್ನು ಮೂಡಿಸುತ್ತಿದೆ. ಮರೆಯಾಗುತ್ತಿರುವ ಈ ಕಲೆಯ ಉಳಿಸುವಿಕೆಗೆ ಶ್ರಮಿಸುತ್ತಿರುವ ಇವರನ್ನು ಅಭಿನಂದಿಸೋಣ.          
   ಡಾ.ಶ್ರೀಕಾಂತ್ ಸಿದ್ದಾಪುರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ