ಶನಿವಾರ, ಫೆಬ್ರವರಿ 18, 2012

Dr.Kambara & Kannada

ಡಾ. ಕಂಬಾರ ಮತ್ತು ಕನ್ನಡ
ಡಾ.ಚಂದ್ರಶೇಖರ ಕಂಬಾರರಿಗೆ ಇತ್ತೀಚೆಗಷ್ಟೇ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಉಡುಪಿ ಮತ್ತು  ಕಂಬಾರರ ನಡುವೆ ಬಲವಾದ ಬಾಂಧವ್ಯದ ಬೆಸುಗೆ ಇದೆ. ಅವರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದವರು.  1968 ರಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಡಾ.ಕಂಬಾರರು ಫೆಬ್ರವರಿ 18 ರಂದು ತಾನು ಸೇವೆ ಸಲ್ಲಿಸಿದ ಸಂಸ್ಥೆಯ ಆಹ್ವಾನದ ಮೇರೆಗೆ  ಉಡುಪಿಗೆ ಆಗಮಿಸಿದ್ದರು. ಅಂದು ಪೂರ್ಣಪ್ರಜ್ಞ ಆಡಳಿತ ಸಮಿತಿಯು ಡಾ. ಕಂಬಾರರನ್ನು  ಅಂದು ಅಭಿನಂದಿಸಿತು. ಉಡುಪಿ ಶ್ರೀ ಅದಮಾರುಮಠ ಶಿಕ್ಷಣ ಮಂಡಳಿಯ ಅಧ್ಯಕ್ಷರಾಗಿರುವ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಕಂಬಾರರನ್ನು ಅಭಿನಂದಿಸಿ ಆಶೀರ್ವಚಿಸಿದರು.
ಮೊಕಾಶಿ,ಅಡಿಗ ಮತ್ತು ಕಂಬಾರ : ಡಾ. ಕಂಬಾರರು ಉಡುಪಿಯ ಪಿಪಿಸಿಗೆ ಬರುವ ಮೊದಲು ಸಾಗರದ ಕಾಲೇಜಿನಲ್ಲಿದ್ದರು.  ಗೋಪಾಲಕೃಷ್ಣ ಅಡಿಗರ ಸೂಚನೆಯಂತೆ ಉಡುಪಿಯ ಪಿಪಿಸಿಗೆ ಕನ್ನಡ ಅಧ್ಯಾಪಕರಾಗಿ ಆಗಮಿಸಿದರು. ಆಗ ಖ್ಯಾತ ವಿಮರ್ಶಕ ಶಂಕರ್ಮೊಕಾಶಿ ಪುಣೇಕರ್ ಕಾಲೇಜಿನ ಪ್ರಾಂಶುಪಾಲರು.ಸುಮಾರು ಒಂದು ವರ್ಷ ದುಡಿದ ಕಂಬಾರರಿಗೆ ಅನಂತರ ಅಮೆರಿಕಾದ ಚಿಕಾಗೋಗೆ ಹೋಗುವ ಅವಕಾಶ ಒದಗಿ ಬಂತು.ಈ ಸಂದರ್ಭದಲ್ಲಿ ಅವರನ್ನು ಹರಸಿ ಸಹಕರಿಸಿದವರು ಅದಮಾರುಮಠಧ ಶ್ರೀ ಶ್ರೀ ವಿಬುಧೇಶತೀರ್ಥ ಶ್ರೀಪಾದರು.ಅಮೆರಿಕಾದಿಂದ ಮರಳಿದ ನಂತರ ಶ್ರೀ ಶ್ರೀ ವಿಬುಧೇಶತೀರ್ಥರು ಕಂಬಾರರನ್ನು ಸನ್ಮಾನಿಸಿದ್ದರು.
ಎಲಿಯಟ್ ಆಗಲಿಲ್ಲ; ಕಂಬಾರನಾದೆ :
 ಡಾ. ಕಂಬಾರರು ಕನ್ನಡ ನುಡಿ ಮತ್ತು ಇಲ್ಲಿನ ದೇಶೀಯ ಸಂಸ್ಕೃತಿಗಳ ಬಗ್ಗೆ ಅಪಾರ ಗೌರವ ಹೊಂದಿದ್ದವರು. ಅವರ ಸಾಹಿತ್ಯ ಸಾಧನೆಗೆ ಪ್ರಮುಖ ಪ್ರೇರಣೆಯೇ ಜಾನಪದ ಸಂಪತ್ತು. ಪಿಪಿಸಿಯನ್ನು ಬಿಡುವ ಮೊದಲು ಕೆಲವು ದಿನಗಳ ಕಾಲ ಅಡಿಗರ ಒಡನಾಟದಲ್ಲಿ ಕಂಬಾರರು ಕನ್ನಡ ಅಧ್ಯಾಪಕರಾಗಿ ದುಡಿದ್ದಿದ್ದರು. ಆಗ ನವ್ಯದ ಕಾಲ. ಕಂಬಾರರ ಮೇಲೂ ನವ್ಯದ ಪ್ರಭಾವ ಬೀರಿತ್ತು. ಆದರೆ ನವ್ಯದ ಈ ಪ್ರಭಾವ ಕಂಬಾರರ ದೇಶೀಯತೆಯನ್ನು ಬಲಿ ತೆಗೆದುಕೊಳ್ಳಲಿಲ್ಲ. ಅವರೇ ಒಂದು ಕಡೆ ಹೀಗೆ ಹೇಳುತ್ತಾರೆ. ನವ್ಯರು ಎಲಿಯಟ್ ತರಹ ಬರೆಯಲು ಆರಂಭಿಸಿದರೆ, ನಾನು ಹೇಳತೇನ ಕೇಳ ಬರೆದು ಎಲಿಯಟ್ ಬದಲು ಕಂಬಾರನಾದೆ. ನನ್ನ ಸಂಸ್ಕೃತಿಯನ್ನು ಹೇಗೆ ಪ್ರೀತಿಸಬೇಕು ಅನ್ನೋದು ನನಗೆ ಮುಖ್ಯ. ಎಲಿಯಟ್ನನ್ನು ಕಾಪಿ ಮಾಡೋದಲ್ಲ. ನನ್ನ ಹಳ್ಳಿಯನ್ನು ನಾವು ಪ್ರೀತಿಸದಿದ್ದರೆ ಮತ್ಯಾರು ಪ್ರೀತಿಸುತ್ತಾರೆ?.  ಹಾಗಾಗಿ ನವ್ಯದ ಕಾವಿನ ನಡುವೆ ನವ್ಯಕ್ಕಿಂತ ಭಿನ್ನವಾಗಿ ಬರೆದ ಕಂಬಾರರು  ದೇಶೀಯ ಸಂಸ್ಕೃತಿಯ ಆಳವಾದ ಅಪ್ಪುಗೆಯಿಂದ ಹೊರಬರಲಿಲ್ಲ.
ಕಾವ್ಯವನ್ನು ಓದು ಕಂಬಾರ : ಡಾ. ಕಂಬಾರರಿಗೆ ಅಡಿಗರ ಮೇಲೆ ಗೌರವವಿತ್ತು. ಅವರ ಕಾವ್ಯವನ್ನು ಮೆಚ್ಚಿಕೊಂಡಿದ್ದರು. ಅಡಿಗರು ಆಗಾಗ ಕಂಬಾರರನ್ನು ಕೆಣಕುತ್ತಿದ್ದರು.ನೀನು ಕಾವ್ಯವನ್ನು ಓದು.ಹಾಡಬೇಡ.ನವ್ಯ ಕಾವ್ಯಗಳು ಹಾಡುವಿಕೆಗಿಂತ ಓದಲಿಕ್ಕೇ ಹೆಚ್ಚು ಸೂಕ್ತವಾದವುಗಳು. ಆದರೆ ಸಭೆಯಲ್ಲಿ ಕಂಬಾರರು ಕಾವ್ಯ ಓದಿದರೆ ಹಾಡಿ ಎಂಬ ಬೇಡಿಕೆ. ಕಂಬಾರರ ಕಾವ್ಯದಲ್ಲಿದ್ದ ಜಾನಪದ ಸತ್ವ, ಅದರ ಧಾಟಿ, ಅವರ ತುಂಬುಕಂಠ ಓದುವುದಕ್ಕಿಂತ ಹಾಡುವುದಕ್ಕೇ ಹೇಳಿ ಮಾಡಿಸಿದಂತಿತ್ತು.
ಕಾವ್ಯ ಹೃದಯದ ಭಾಷೆ : ಕಂಬಾರರ ದೃಷ್ಟಿಯಲ್ಲಿ ಕಾವ್ಯ ಹೃದಯಕ್ಕೆ ನಾಟುವಂತಿರಬೇಕು. ಅದು ಕೇವಲ ಬೌದ್ಧಿಕ ಕಸರತ್ತಾಗಿರಬಾರದು. ಒಮ್ಮೆ ಜೀನ್ಸ್ ಪ್ಯಾಂಟ್ ಧರಿಸಿದ ಕವಿಯೊಬ್ಬ ಕಂಬಾರರನ್ನು ಭೇಟಿಯಾದನಂತೆ. ಆಗ ಅವರ ಪ್ರಶ್ನೆ- ತಲೀ ಒಳಗ ಏನಿದ್ಯೋ ತಮ್ಮಾ?. ಮಿದುಳಿದೆ ಸಾರ್ ಕವಿಯ ಉತ್ತರ. ಥೂ ! ನಿನ್ನ ಕವಿ ಹೃದಯದೊಳಗ ಹೃದಯ ಇರಬೇಕೋ ತಮ್ಮಾ ಎಂಬುದು ಕಂಬಾರರ ಉಪದೇಶ. ಕಂಬಾರರು ಹೇಳುವಂತೆ ಕಾವ್ಯ ಅಂದ್ರೆ ಶುದ್ಧಾಂಗ ಶಬ್ದವನ್ನೇ ನಂಬಿರುವ ಮಾಧ್ಯಮ. ಕಾವ್ಯ ರಚನೆ ಅಂದ್ರೆ ಒಂದು ಬಗೆಯ ತಪಸ್ಸು ಮಾಡಿದ ಹಾಗೆ. ತಪಸ್ಸು ಮಾಡಬೇಕು. ಅದರ ಮೂಲಕ ಶಬ್ದಗಳಲ್ಲಿ ಮಾಂತ್ರಿಕ ಶಕ್ತಿ ತುಂಬಬೇಕು. ಮಂತ್ರಗಳಲ್ಲಿ ದೇವತೆಗಳನ್ನು ಅಡಗಿಸಿರಲಿಲ್ಲವೇ?. ಹಾಗೆ.
ಕನ್ನಡ ಕಟ್ಟುವ ಕನಸು : 1992 ರಿಂದ 98 ರ ತನಕ ಹಂಪಿ ಕನ್ನಡ ವಿ.ವಿ. ಯ ಉಪಕುಲಪತಿಗಳಾಗಿದ್ದ ಕಂಬಾರರಿಗೆ ಕನ್ನಡವನ್ನು ಕಟ್ಟಬೇಕೆಂಬ ಕನಸು.  ಹಂಪಿಯ ಮೊದಲ ಉಪಕುಲಪತಿಗಳಾಗಿ ನೇಮಕಗೊಂಡ ಕಂಬಾರರು  ಕನ್ನಡ ಭಾಷೆ ಮತ್ತು ದೇಶಿ ಸಂಸ್ಕೃತಿಯ ಉಳಿವಿಗೆ ಶ್ರಮಿಸಿದರು. ಉಪಕುಲಪತಿಗಳಾದಾಗ ಅವರ ಕನಸನ್ನು ಅವರೇ ಹೇಳಿಕೊಂಡಿದ್ದಾರೆ.  ಹಂಪಿಯೊಳಗ ಕನ್ನಡ ಕಟ್ತೀನಿ, ಕನ್ನಡ ಸಂಸ್ಕೃತಿ ಮತ್ತೆ ತರ್ತೀನಿ. ಅವರ ಕನಸಿನ ಫಲವೇ ಕನ್ನಡ ಜಾನಪದ ವಿಶ್ವಕೋಶ.  ಕುರ್ತಕೋಟಿಯವರು ಕಂಬಾರರ ಕುರಿತು ಒಂದು ಕಡೆ ಹೇಳುವ ಮಾತುಗಳಿಲ್ಲಿ ಗಮನಾರ್ಹ.  ಕಂಬಾರರ ಮಹಾಕಾವ್ಯಗಳು ಎರಡು.  ಚಕೋರಿ ಮತ್ತು ಕನ್ನಡ ವಿಶ್ವವಿದ್ಯಾನಿಲಯ. ಕಂಬಾರರ ಕನ್ನಡಾಭಿಮಾನ ಅವರ ಮಾತುಗಳಲ್ಲೇ ಕೇಳೋಣ. ನಾನು ಏನು ಹೇಳಬೇಕೋ ಅದನ್ನು ಹೇಳುವುದಕ್ಕೆ ಕನ್ನಡದಲ್ಲಿ ಶಕ್ತಿಯಿದೆ. ಅರ್ಥವಂತಿಕೆ ಕಟ್ಟಿಕೊಡುವ ಶಕ್ತಿ ನನ್ನ ಭಾಷೆಗಿದೆ. ನನ್ನ ಕನ್ನಡ ಭಾಷೆ, ಕನ್ನಡ ಅನುಭವದ ಮೇಲೆ ನನಗೆ ನಂಬಿಕೆ ಇದೆ.
ಜಾಗತೀಕರಣ ದೇಶೀಯ ಸಂಸ್ಕೃತಿಗೆ ಮಾರಕ : ಕನ್ನಡ ನೆಲದ ಶ್ರೀಮಂತ ಸಂಸ್ಕೃತಿಯಾದ ದೇಶೀಯತೆಯನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಲು ಕಂಬಾರರು ಸಿದ್ಧರಿರಲಿಲ್ಲ. ಜಾಗತೀಕರಣದಿಂದ ಈ ಶ್ರೀಮಂತ ಸಂಸ್ಕೃತಿ ನಾಶವಾದೀತೆಂಬ ಭಯ. ಹಾಗಾಗಿ ಕಟುವಾದ ಮಾತುಗಳಲ್ಲೇ ಜಾಗತೀಕರಣವನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.ಅವರ ಪ್ರಕಾರ ಜಾಗತೀಕರಣ ಎಂದರೆ ಅಮೆರಿಕಾಮಯ. ಅಮೆರಿಕಾದಲ್ಲಿ ಜಾನಪದ ಇಲ್ಲ. ಅಲ್ಲಿ ಒಂದು ಒಳ್ಳೆಯ ಕತೆ ಹುಟ್ಟಲು ಸಾಧ್ಯವಿಲ್ಲ. ಹಾಗಾಗಿ ಅವರು ಶೌಚಾಲಯದ ಮೇಲಿನ ಬರಹವನ್ನೇ ಜಾನಪದ ಎನ್ನಬಹುದು.ಆದರೆ ನಮ್ಮದು ಇದಕ್ಕಿಂತ ಭಿನ್ನವಾದುದು.ಜಾಗತೀಕರಣದ ಮುಷ್ಟಿಯಿಂದ ಅದು ಮುಕ್ತವಾಗಬೇಕು.
 ಕಂಬಾರರ ಕೃತಿಗಳಲ್ಲಿ ಇಲ್ಲಿನ ಗ್ರಾಮೀಣ ಸಂಸ್ಕೃತಿ ಮತ್ತು ನೆಲದ ಪ್ರೀತಿಯ ಸೆಳೆತವಿದೆ. ಸೊಗಸಾದ ಗ್ರಾಮೀಣ ಭಾಷೆಯ ಕಂಪಿದೆ. ಆಧುನಿಕ ಶಿಕ್ಷಣ, ಜಾಗತೀಕರಣ, ಪಾಶ್ಚಾತ್ಯ ಸಂಸ್ಕೃತಿಗಳ ದಟ್ಟ ಪ್ರಭಾವಗಳ ನಡುವೆಯೂ ಕಂಬಾರರು ದೇಶೀಯತೆಯ ದಾರಿ ತನ್ನದು ಎಂದರು. ಅದರಂತೆ ಬರೆದರು. ಈ ಹಿನ್ನೆಲೆಯಲ್ಲಿ ಇವರಿಗೆ ದೊರೆತ ಜ್ಞಾನಪೀಠ ಪ್ರಶಸ್ತಿ ಇಲ್ಲಿನ ಶ್ರೀಮಂತ ದೇಶೀಯ ಸಂಸ್ಕೃತಿಗೆ ಸಂದ ಗೌರವವೆನ್ನಲು ಹೆಮ್ಮೆ ಎನಿಸುತ್ತಿದೆ.
       (ಆಧಾರ ಗ್ರಂಥ : ಶಿವಾಪುರ ಕಂಬಾರ ನಮಸ್ಕಾರ)
          ಡಾ.ಶ್ರೀಕಾಂತ್ ಸಿದ್ದಾಪುರ
(18-02-2012 ರ ವಿಜಯಕರ್ನಾಟಕದಲ್ಲಿ ಪ್ರಕಟವಾದ ಲೇಖನ) 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ