ಉಡುಪಿ: ಸಾಕಷ್ಟು ಸಂಶೋಧನೆಗಳು ನಡೆದ ಅನಂತರವೂ ಬೆಳಕಿನ ಸ್ವರೂಪದ ನಿಗೂಢತೆ ಮುಂದುವರೆದಿದೆ. ಬೆಳಕು ಒಂದು ಅಲೆಯೋ ಅಥವಾ ರೇಖೆಯೋ ಅಥವಾ ಕಣವೋ ಎಂಬ ಜಿಜ್ಞಾಸೆ ಇಂದಿಗೂ ಇದೆ ಎಂದು ಬೆಂಗಳೂರು ವಿ.ವಿ. ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ| ಶರತ್ ಅನಂತಮೂರ್ತಿ ಹೇಳಿದರು.
ಅವರು ಜೂ. 18ರಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಕೌನ್ಸಿಲ್ ಹಾಗೂ ಮಂಗಳೂರು ವಿ.ವಿ. ಭೌತಶಾಸ್ತ್ರ ಪ್ರಾಧ್ಯಾಪಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ "ವಿಶ್ವ ಬೆಳಕಿನ ವರ್ಷ-2015'ರಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಬೆಳಕಿನ ಬಗ್ಗೆ ವಿಜ್ಞಾನಿಗಳು ಸಂಶೋಧನೆಗಳ ಮೂಲಕ ವಿಶ್ಲೇಷಿಸಿದರೆ ಸಾವಿರಾರು ವರ್ಷಗಳ ಹಿಂದೆ ಋಷಿಮುನಿಗಳು, ದಾರ್ಶನಿಕರಿಗೆ ಅವರ ಶಕ್ತಿಯಿಂದಲೇ ಬೆಳಕಿನ ಗೋಚರ ಆಗಿತ್ತು. 20ನೇ ಶತಮಾನದಲ್ಲಿ ಬೆಳಕು ಎಂಬುದು ಅಲೆ ಎಂದು ವ್ಯಾಖ್ಯಾನಿಸಲ್ಪಟ್ಟರೆ, ಇಂದು ಬೆಳಕು ಕಣವೂ ಹೌದು ಎಂಬುದಾಗಿ ಹೇಳಲಾಗುತ್ತಿದೆ. ಬೆಳಕಿನ ಅಧ್ಯಯನಕ್ಕೆ ಸಂಬಂಧಿಸಿ 1015ರಲ್ಲಿ ಅರೇಬಿಕ್ ಬರಹಗಾರ ರಚಿಸಿದ ಪುಸ್ತಕ ಕೂಡ ಮಹತ್ವದ ಕೊಡುಗೆ ಸಲ್ಲಿಸಿದೆ. ವೇದ, ಗಾಯತ್ರಿ ಮಂತ್ರದಲ್ಲೂ ಅದ್ಭುತವಾಗಿ ಉಲ್ಲೇಖೀಸಲ್ಪಟ್ಟಿರುವ ಬೆಳಕನ್ನು ಜ್ಞಾನ ಎಂದೇ ಗುರುತಿಸಲಾಗುತ್ತದೆ ಎಂದು ಪ್ರೊ| ಅನಂತಮೂರ್ತಿ ಹೇಳಿದರು.
ಸಮಾರಂಭ ಉದ್ಘಾಟಿಸಿದ ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ಬಿ. ವಿಜಯ ಬಲ್ಲಾಳ್ ಮಾತನಾಡಿ, ಬೆಳಕಿನ ಕುರಿತಾದ ಕುತೂಹಲ ಬಹು ಸಮಯದಿಂದ ಇದೆ. ಸ್ವತ್ಛ ಮನಸ್ಸು, ತಪಸ್ಸಿನಂತಹ ಶ್ರಮದಿಂದ ಯಾವುದೇ ಸಂಶೋಧನೆಯಿಂದ ಯಶಸ್ಸು ಸಾಧ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪಿಪಿಸಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಎ.ಪಿ. ಭಟ್, ಬೆಳಕಿನ ವಿಜ್ಞಾನದ ಪ್ರಗತಿಯ ಕುರಿತು ಜಾಗೃತಿಗಾಗಿ ಮತ್ತು ಆರೋಗ್ಯ, ಪರಿಸರ, ಆರ್ಥಿಕತೆ ಮತ್ತು ಸಂವಹನದಲ್ಲಿ ಬೆಳಕಿನ ಮಹತ್ವವನ್ನು ತಿಳಿಸುವುದಕ್ಕಾಗಿ ವಿಶ್ವಸಂಸ್ಥೆಯ ಶಿಕ್ಷಣ, ವಿಜ್ಞಾನ ಮತ್ತು ಸಾಂಸ್ಕೃತಿಕ ಸಂಘವು 2015ನೇ ವರ್ಷವನ್ನು "ವಿಶ್ವ ಬೆಳಕಿನ ವರ್ಷ'ವನ್ನಾಗಿ ಘೋಷಿಸಿದೆ ಎಂದರು.
ಪಿಸಿಎಂಸಿಯ ಗೌರವ ಕಾರ್ಯದರ್ಶಿ ಡಾ| ಜಿ.ಎಸ್. ಚಂದ್ರಶೇಖರ್ ಉಪಸ್ಥಿತರಿದ್ದರು.
ಮಣಿಪಾಲ ಎಂಐಟಿಯ ಭೌತಶಾಸ್ತ್ರ ವಿಭಾಗದ ಡಾ| ವ್ಯಾಸ ಉಪಾಧ್ಯಾಯ, ಬೆಂಗಳೂರು ಜವಾಹರ್‌ಲಾಲ್ ತಾರಾಲಯದ ಹಿರಿಯ ವಿಜ್ಞಾನ ಅಧಿಕಾರಿ ಮಧುಸೂದನ್ ಅವರು ಕಾರ್ಯಾಗಾರ ನಡೆಸಿಕೊಟ್ಟರು.
ಕಾಲೇಜಿನ ಪ್ರಾಂಶುಪಾಲ ಡಾ| ಬಿ. ಜಗದೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ರಾಘವೇಂದ್ರ ಎ. ವಂದಿಸಿದರು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುಪರ್ಣಾ ಮತ್ತು ಭೌತಶಾಸ್ತ್ರ ಉಪನ್ಯಾಸಕಿ ಸುಶ್ಮಿತಾ ವಿ. ಕಾಮತ್ ಕಾರ್ಯಕ್ರಮ ನಿರ್ವಹಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ