ಶನಿವಾರ, ನವೆಂಬರ್ 19, 2011

ಪು ತಿ ನ ರವರ ಒಂದು ಕವನ

ಸಮಕಾಲೀನ ಸಂದರ್ಭದಲ್ಲಿ ಪು.ತಿ.ನ. ರವರ ನಿಲ್ಲಿಸದಿರು ವನಮಾಲಿ ಕವನ
 ಭಕ್ತ ಕವಿ ಪು. ತಿ. ನರಸಿಂಹಾಚಾರ್ರವರ ನಿಲ್ಲಿಸದಿರು ವನಮಾಲಿ ಕೊಳಲಗಾನವ ಅವರ ಪ್ರಸಿದ್ಧ ಕವನಗಳಲ್ಲಿ ಒಂದು.  ಮಥುರಾ ನಗರದಲ್ಲಿ ಬಿಲ್ಲಹಬ್ಬ. ಕೃಷ್ಣ ಮತ್ತು ಬಲರಾಮರನ್ನು ಕಂಸನು ಹಬ್ಬಕ್ಕೆ ಆಹ್ವಾನಿಸುತ್ತಾನೆ. ಅಕ್ರೂರನು ಕಂಸನ ಈ ಆಹ್ವಾನವನ್ನು ಹೊತ್ತು ಗೋಕುಲಕ್ಕೆ ಬರುತ್ತಾನೆ. ಕೃಷ್ಣನು ಗೋಕುಲದಿಂದ ನಿರ್ಗಮಿಸಲು ಸಿದ್ಧತೆ ನಡೆಸುತ್ತಾನೆ.  ಕೃಷ್ಣನ ಕೊಳಲ ಗಾನದ ಅಗಲುವಿಕೆ ಗೋಪಿಕಾ ಸ್ತ್ರೀಯರಲ್ಲಿ ಅತೀವ ವೇದನೆ ತರುತ್ತದೆ.  ಅದನ್ನೇ ಮೆಲುಕು ಹಾಕುತ್ತಾ ಸಾಗುವ ಈ ಕವನದಲ್ಲಿ ಗೋಪಿಕಾ ಸ್ತ್ರೀಯರ ಮತ್ತು ಕೃಷ್ಣನ ನಡುವಿರುವ ಬಾಂಧವ್ಯವು ಭಾವಪೂರ್ಣವಾಗಿ ಮೂಡಿಬಂದಿದೆ.
 ಈ ಕವನವು ಗೋಕುಲ ನಿರ್ಗಮನಕ್ಕೆ ಸಂಬಂಧಿಸಿಸಿದುದಾದರೂ, ಕಾವ್ಯದ ಉದ್ದಕ್ಕೂ ಸಮಕಾಲೀನ ಸಂದರ್ಭದ ಸಮಸ್ಯೆಗಳನ್ನು ಮತ್ತು ಅದಕ್ಕೆ ಪರಿಹಾರಗಳನ್ನು ಕಾಣಬಹುದು.ನಿಜವಾದ ಕಾವ್ಯ ಸಾರ್ವಕಾಲಿಕ ಸತ್ಯವನ್ನು ಒಳಗೊಂಡಿರಬೇಕು ಎಂಬುದು ವಿಮರ್ಶಕರ ನಿಲುವು. ಅಂತಹ ಕಾವ್ಯ ಉತ್ತಮ ಕಾವ್ಯಗಳ ಸಾಲಿಗೆ ನಿಲ್ಲುತ್ತದೆ. ಈ ದೃಷ್ಟಿಯಿಂದ ಈ ಕವನವು  ಹೆಚ್ಚಿನ ಪ್ರಾಮುಖ್ಯವನ್ನು ಪಡೆಯುತ್ತದೆ. ಕವಿಗೆ ಅರಿವಿದ್ದೋ ಅಥವಾ ಇಲ್ಲದೆಯೋ ಈ ಸಮಕಾಲೀನ ಸಂಗತಿಗಳು ಕವನದಲ್ಲಿ ತೆರೆದುಕೊಳ್ಳುತ್ತಿರುವುದು ಕವನದ ಘನತೆಯನ್ನು ಹೆಚ್ಚಿಸಿದೆ.
 ಸಮಕಾಲೀನ ಸಂದರ್ಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಕವನವನ್ನು ಅಥರ್ೈಸ ಹೊರಟಾಗ ಕಾವ್ಯದಲ್ಲಿ ಅನೇಕ ಅಂಶಗಳು ನಮಗೆ ಆಪ್ಯಾಯಮಾನವಾಗುತ್ತವೆ. ಅವುಗಳಲ್ಲಿ ಪ್ರಮುಖವಾದವುಗಳು ಕಾವ್ಯದಲ್ಲಿ ಚಿತ್ರಿಸಲ್ಪಟ್ಟ ದೇಶೀಯ ಅಂಶ, ಆಧುನಿಕ ಪ್ರಪಂಚದ ಒತ್ತಡಗಳ ನಡುವೆ ಸಂಗೀತದಂತಹ ಕಲಾಪ್ರಕಾರಗಳ ಮಹತ್ವ್ತ,ಜೀವನ ಮಟ್ಟದ ಸುಧಾರಣೆಯ ಸಂಬಂಧ ಗೋಪಿಕಾ ಸ್ತ್ರೀಯರ ಮೂಲಕ ಕವಿ ಕೊಡುವ ಸಂದೇಶ.
 ಇಂದು ದೇಸೀಯ ಸಂಸ್ಕೃತಿಗೆ ಧಕ್ಕೆ ಒದಗುತ್ತಿರುವ ಬಗ್ಗೆ ಆಕ್ಷೇಪ ಸಾಮಾನ್ಯವಾದುದು. ವಿದೇಶಿ ಸಂಸ್ಕೃತಿಗಳ ಪ್ರಭಾವ ಗ್ರಾಮೀಣ ಸಂಸ್ಕೃತಿಯ ಬುಡಕ್ಕೆ ಅಪಾಯ ತರುತ್ತಿವೆ. ಗ್ರಾಮೀಣ ಬದುಕಿನಿಂದ ವಿಮುಖರಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗ್ರಾಮಗಳು ಬರಿದಾಗುತ್ತಿದ್ದು, ನಗರ ಜೀವನವು ನಿತ್ಯದ ಮಾತಾಗಿದೆ. ಈ ಕವನವು ದೇಸೀಯ ಸಂಸ್ಕೃತಿಯತ್ತ ಒಲವು ತೋರಿಸುವಂತಿದೆ. ಇಲ್ಲಿನ ಕೃಷ್ಣನು ಗ್ರಾಮೀಣ ಭಾಗದ ಮುಗ್ಧ ಜನರ ಪ್ರತಿನಿಧಿ. ಅವರ ಬದುಕಿನ ಕತ್ತಲೆಯನ್ನು ಓಡಿಸಿ, ಬೆಳಕಿನ ಕಿರಣಗಳನ್ನು ಬೀರುವವನು.  ಕವನದ ಕೃಷ್ಣನ ಉಡುಗೆ ತೊಡುಗೆಗಳೂ ಗ್ರಾಮೀಣ ಪರಿಸರವನ್ನೇ ನೆನಪಿಸುವಂತಿದೆ. ಆತನು ಧರಿಸಿರುವುದು ವನಮಾಲೆಯನ್ನು. ಆತನ ಕೈಯಲ್ಲಿರುವುದು ಗ್ರಾಮೀಣ ಭಾಗದಲ್ಲಿ ಲಭ್ಯವಿರುವ ಬಿದಿರಿನಿಂದ ಮಾಡಲ್ಪಟ್ಟ ಕೊಳಲು. ಆತನ ಸುತ್ತ ಇರುವ ಗೋಪಿಕಾ ಸ್ತ್ರೀಯರೂ ಗ್ರಾಮೀಣ ಹಿನ್ನೆಲೆಯವರು.  ಹಳ್ಳಿಯ ಸಾಮಾನ್ಯ ಸ್ತ್ರೀಯರಂತೆ ಮುಗ್ಧರು. ಈ ಮುಗ್ಧ ಮಂದಿಗೆ ಕೃಷ್ಣನ ಮೇಲೆ ಅತೀವ ಭಕ್ತಿ. ಅವರ ಗೌರವಕ್ಕೆ ಪಾತ್ರನಾದವನು ಕೃಷ್ಣ. ಇದಕ್ಕೆ ಪ್ರಮುಖ ಕಾರಣ ಶ್ರೀ ಕೃಷ್ಣನು ಅವರ ಮೇಲೆ ಹರಿಸಿದ ನಿಷ್ಕಲ್ಮಶ ಮತ್ತು ನಿ:ಸ್ವಾರ್ಥ ಪ್ರೀತಿ.  ಈ ಪ್ರೀತಿ ಕೇವಲ ಬಾಯಿ ಮಾತಿಗೆ ಸೀಮಿತವಲ್ಲ. ಒಣ ಪ್ರತಿಷ್ಠೆದಿಂದ ಕೂಡಿದುದಲ್ಲ. ಯಾವುದೇ ನಾಟಕೀಯತೆ ಇಲ್ಲಿ ಇಲ್ಲ. ಅದರ ಹಿಂದೆ ಮುಗ್ಧ ಮಂದಿಯ ಬದುಕನ್ನು ಎತ್ತರಕ್ಕೊಯ್ಯುವ ಹಂಬಲ ಇದೆ.  ಹಾಗಾಗಿ ಈ ತರನಾದ ಪ್ರೀತಿಯು ಅವರ ಜೀವನಕ್ಕೆ ಹೊಸ ಅರ್ಥವನ್ನು ತಂದಿದೆ. ಕವನದಲ್ಲಿ ಗೋಪಿಕಾ ಸ್ತ್ರೀಯರು ಹೇಳುವ ನಮ್ಮ ಬಾಳಿನಾಳದಿಂದ ಮತ್ಸ್ಯನಂತೆ ಮೇಲೆ ತಂದ, ಕೃಷ್ಣ, ಈ ಚಿದಾನಂದ ಮರಳಿ ಮುಳುಗಿ ಹೋಹುದಯ್ಯಾ ಸಾಲುಗಳೇ ಇದಕ್ಕೆ ಸಾಕ್ಷಿ.
 ಕವನದಲ್ಲಿ ವ್ಯಕ್ತವಾದ ಗ್ರಾಮೀಣ ಬದುಕಿನ ಈ ಮುಗ್ಧ ಸ್ತ್ರೀಯರ ಜೀವನ ಮಟ್ಟದ ಸುಧಾರಣೆಯ ಸಂಗತಿ  ಸಮಕಾಲೀನ ಸಂದರ್ಭದಲ್ಲಿ ಹೆಚ್ಚು ಅರ್ಥಪೂರ್ಣವಾಗಿದೆ. ಇಂದು ಹಣಕ್ಕೆ ವ್ಯಾಪಕ ಮಹತ್ವ ಲಭಿಸುತ್ತಿದೆ.  ಹಣವೇ ಯೋಗ್ಯತೆಯನ್ನು ಅಳೆಯುವ ಪ್ರಮುಖ ಮಾನದಂಡವಾಗುತ್ತಿದೆ. ಹಣ ಸಂಪಾದನೆಯ ಹುಚ್ಚಿನ ಮುಂದೆ ನಮ್ಮ ಹಿರಿಯರು ಬೆಳೆಸಿದ ಅನೇಕ  ಮೌಲಿಕ ವಿಚಾರಗಳು ಮೂಲೆಗುಂಪಾಗುತ್ತಿವೆ. ಹಣದ ಹಿಂದೆ ಬಿದ್ದ ಮನುಷ್ಯರಿಗೆ ಮಾನಸಿಕ ನೆಮ್ಮದಿಯು ಮರೀಚಿಕೆಯಾಗುತ್ತಿದೆ. ಬದುಕಿನ ಸಂಬಂಧಗಳೂ ಶಿಥಿಲವಾಗುತ್ತಿವೆ. ಆದರೆ ಈ ಕವನವು ಜೀವನ ಮಟ್ಟದ ಸುಧಾರಣೆಯ ಮಾನದಂಡದ ಬಗ್ಗೆ ತಿಳಿಸುತ್ತಾ,ಸಮಕಾಲೀನ ಸಮಾಜದ ಈ ತಪ್ಪು ತಿಳುವಳಿಕೆಗಳನ್ನು ತೊಡೆದು ಹಾಕಲು ಶ್ರಮಿಸುವಂತಿದೆ. ಗೋಪಿಕಾ ಸ್ತ್ರೀಯರ ಮೂಲಕ ಬದುಕನ್ನು ಬೆಳಗಿಸುವ ಹೊಸ ಸೂತ್ರವೊಂದನ್ನು ಕವಿಯು ಇಲ್ಲಿ ನೀಡುತ್ತಿರುವುದು ಗಮನಾರ್ಹ.  ಕವಿಯ ಪ್ರಕಾರ ಮಾನಸಿಕವಾದ ಚಿಂತೆಗಳಿಂದ ಮುಕ್ತರಾಗುವುದೇ ಬದುಕಿನ ಮಹತ್ತರ ಸಾಧನೆ. ನಿತ್ಯ ನೆಮ್ಮದಿಯ ಬದುಕೇ ಯಶಸ್ಸಿನ ದ್ಯೋತಕ.  ಕವನದಲ್ಲಿ ಈ ಅರ್ಥವನ್ನು ಸ್ಫುರಿಸುವ ಸಾಲುಗಳಿಲ್ಲಿ ಗಮನಾರ್ಹ. ನೀರು ನಿಂತು ಕೊಳೆಯುವಂತೆ ನೂರು ಚಿಂತೆಗಳು ಮನಸ್ಸಿನಲ್ಲಿ ನೆಲೆನಿಂತು ಗೋಪಿಕಾ ಸ್ತ್ರೀಯರನ್ನು ಕಾಡುತ್ತಿದ್ದವು.  ಕೃಷ್ಣನ ಕೊಳಲ ಧ್ವನಿಯ ನೆರೆಯು ನುಗ್ಗಿ ಈ ಚಿಂತೆಗಳಿಂದ ಅವರನ್ನು ಬಿಡುಗಡೆಗೊಳಿಸಿತಂತೆ. ಗೋಪಿಕಾ ಸ್ತ್ರೀಯರ ಬದುಕಿಗೆ ಬೆಳಕಾಗಿ ಬಂದವನು ಶ್ರೀ ಕೃಷ್ಣ. ಅದರಲ್ಲೂ ಆತನ ಕೊಳಲಗಾನ.  ಕೃಷ್ಣನ ಪ್ರಭಾವದ ಮೊದಲು ಸದಾ ದು:ಖ, ಕಷ್ಟಗಳ ಕೋಟಲೆಗಳ ನಡುವೆ ಅವರ ಬದುಕು ಸಾಗುತ್ತಿತ್ತು. ಆದರೆ ಕೃಷ್ಣನ ಕೊಳಲಗಾನ ಅವರ ಬದುಕಿನ ಶೈಲಿಯನ್ನೇ ಬದಲಿಸಿತು. ಆದರೆ ಈ ಬದಲಾವಣೆ ಆರ್ಥಿಕವಾದ ದೃಷ್ಟಿಯಿಂದ ಗಣನೀಯವಾಗಿ ಆಗದೇ ಇರಬಹುದು.  ಆದರೆ ಮಾನಸಿಕ ಸ್ತರದಲ್ಲಿ ಅವರ ಬದುಕು ಶ್ರೀಮಂತವಾಯಿತು. ಅತಿಯಾದ ಅಹಂಕಾರ, ವೈಭವದ ಅಪೇಕ್ಷೆ ಮೊದಲಾದ ಗುಣಗಳು ಕರಗಿ ಆನಂದ, ಸಂತೃಪ್ತಿಗಳು ಅವರ ಜೀವನದಲ್ಲಿ ನಿತ್ಯ ಸಂಗಾತಿಗಳಾದವು. ಈ ಸುಧಾರಣೆಗೆ ಮುಖ್ಯ ಕಾರಣ ಶ್ರೀ ಕೃಷ್ಣನ ಸಂಸರ್ಗ ಮತ್ತು ಆತನ ಕೊಳಲನಾದದಲ್ಲಿ ಅವರು ಬೆಳೆಸಿಕೊಂಡ ಆಸಕ್ತಿ. 
 ಇಂದು ಆರ್ಥಿಕವಾಗಿ ನಾವು ಶ್ರೀಮಂತರಿರಬಹುದು. ಆದರೆ ಮಾನಸಿಕವಾಗಿ ನಮ್ಮಲ್ಲಿ ಹೆಚ್ಚಿನವರು ಕಡುಬಡವರು. ಸಂತೋಷ, ತೃಪ್ತಿ, ಆನಂದ ಬದುಕಿನಿಂದ ಮಾಯವಾಗುತ್ತಿದೆ. ಹಾಗಾಗಿ ಮಾನಸಿಕ ಒತ್ತಡ, ಹತಾಶೆಗಳು ಇಂದು ಮನುಷ್ಯರನ್ನು ಕಾಡುತ್ತಿವೆ. ಈ ಒತ್ತಡಮುಕ್ತ ಬದುಕಿಗೆ ಸಂಗೀತ ಮತ್ತು ಅದರೊಂದಿಗೆ ಬದುಕಿನಲ್ಲಿ ಅರಳಿಸಿಕೊಳ್ಳಬೇಕಾದ ಸ್ನೇಹ ಮತ್ತು ಪ್ರೀತಿಗಳೇ ಮದ್ದುಗಳೆಂದು ಕವನವು ಮತ್ತೆ ಮತ್ತೆ ಸಾರುತ್ತಿದೆ. ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಶಕ್ತಿಯ ಹಿನ್ನೆಲೆಯಲ್ಲಿ ನಮ್ಮ ಬದುಕನ್ನು ಪುನ: ಕಟ್ಟುವ ಅವಶ್ಯಕತೆಗಳನ್ನು ಕವನವು ನೆನಪಿಸುತ್ತದೆ.
 ಆಧ್ಯಾತ್ಮ, ಸಾಹಿತ್ಯ , ಕಲೆ, ಸಂಸ್ಕೃತಿ ಇತ್ಯಾದಿ ಅನೇಕ ಸಂಗತಿಗಳು ಹಣ ಸಂಪಾದನೆಯು ಗುರಿಯ ಮುಂದೆ ನಲುಗುತ್ತಿವೆ.  ಇದು ನಮ್ಮ ಸಮಾಜದ ದುರಂತವೂ ಹೌದು.ಆದರೆ ಸಮಾಜವೊಂದರ ಮೌಲ್ಯವನ್ನು ಕೇವಲ ಆರ್ಥಿಕ ಬಲದಿಂದ ಅಳೆಯುವುದರ ವಿರುದ್ಧ ಕವನ ಧ್ವನಿ ಎತ್ತುತ್ತದೆ.ಬದಲಾವಣೆಯ ಬಿರುಗಾಳಿಯು ಭರದಿಂದ ಬೀಸುತ್ತಿರುವ  ಇಂದಿನ ವಾತಾವರಣದಲ್ಲಿ ಈ ಕವನದ ಆಶಯವು ಒಮ್ಮೆ ನಮ್ಮನ್ನು ಯೋಚಿಸುವಂತೆ ಮಾಡೀತು.         
                                    
           ಡಾ.ಶ್ರೀಕಾಂತ್ ಸಿದ್ದಾಪುರ


2009-10 ನೇ ಸಾಲಿನ ಮಂಗಳೂರು ವಿ.ವಿ. ಪದವಿ ಪರೀಕ್ಷೆಯಲ್ಲಿ ವಿ.ವಿ. ಮಟ್ಟದಲ್ಲಿ ಕನ್ನಡದಲ್ಲಿ ಅಧಿಕ ಅಂಕ ಪಡೆದ ಪಿಪಿಸಿ ವಿದ್ಯಾರ್ಥಿಗಳು

ಮಮತ, ದ್ವಿ.ಬಿ.ಎ.ಕನ್ನಡ (ಐ)

ವಿಕಿ ಮಸ್ಕರೇನಸ್, ದ್ವಿ.ಬಿ.ಕಾಂ. ಕನ್ನಡ ಭಾಷೆ
ಇತರರು

1. ಅಶ್ವಿತ, ದ್ವಿ.ಬಿ.ಎ. ಕನ್ನಡ ಭಾಷೆ 2. ಶ್ರುತಿ ಎಸ್, ಪ್ರ.ಬಿ.ಎಸ್ಸಿ ಕನ್ನಡ ಭಾಷೆ
ಇವರೆಲ್ಲರನ್ನೂ ಮ.ವಿ.ವಿ ಕನ್ನಡ ಅಧ್ಯಾಪಕರ ಸಂಘವು ಇತ್ತೀಚೆಗೆ ಸನ್ಮಾನಿಸಿತು.

ಅಗ್ನಿ-5 ಕ್ಷಿಪಣಿ ಪರೀಕ್ಷೆಗೆ ಸಿದ್ಧತೆ

ಭಾನುವಾರ, ನವೆಂಬರ್ 13, 2011

ನೊಬೆಲ್ ಪುರಸ್ಕೃತ ಜೀವ-ರಸಾಯನ ವಿಜ್ಞಾನಿ ಖೊರಾನಾ ನಿಧನ

Chandigarh mourns death of Nobel laureate Hargobind Khorana

Har Gobind Khorana